ಲಾಜಿಕ್
"ಅದೇನೇ ಲಾಜಿಕ್ ನ್ ಬಗ್ಗೆ ಮಾತಾಡು, ಅದೇನೇ ಪ್ರಾಕ್ಟಿಕಲ್ ಆಗಿರು. ಆದರೆ ನಿನ್ನ ಅಂಥಾ ವಿಪರೀತ ಬೋರಿಂಗ್ ಫಿಲಾಸಫಿಗಳೆಲ್ಲವನ್ನೂ ಮೀರಿದ ಸತ್ಯ ಗೊತ್ತಾ?.... " ನನ್ನ ಪ್ರೀತಿಸ್ತಿದ್ದೀ ನೀನು"!.. ಅದೊಂದು ಸಾಕು ನಿನ್ನೆಲ್ಲ ರಿಯಲಿಸಮ್ ನ್ ತಿಂದು ಹಾಕೋಕೆ. ಯಾಕೇಂದ್ರೆ ನಿನ್ನಂಥಾ Pragmatic realist ನನ್ನ್ಂಥಾ Emotional optimist ನ ಪ್ರೀತಿಸ್ತಿದ್ದೀ ಅಂದ್ರೆ, ನಿನಗೂ ಒಂದಷ್ಟು ಹುಚ್ಚುತನ, ಪಾಗಲ್ ಪನ್ ಇಷ್ಟ ಅಂತ ಅರ್ಥ"
ಒಂದು ಕನಸು ಹೇಳಬೇಕು ನಿನಗೆ
ನಾವಿಬ್ಬರೇ ಇಬ್ಬರು.. ಹಾಸಿ ಹೊದೆಯುವಷ್ಟು ಬೆಳದಿಂಗಳು.. ಸಿಕ್ಕಷ್ಟೂ ದೊರೆಯುವ ಕತ್ತಲ ಮೌನ.. ಭೋರ್ಗರೆಯುವ ಕಡಲಾಳ.. ವರ್ಷಗಳಿಂದ ಉಪ್ಪು ನೀರಿಗೆ ತೋಯ್ದು ಒದ್ದೆಯಾಗಿರುವ ಬೆಚ್ಚಗಿನ ರೇವೆಯಮೇಲೆ ನೆಮ್ಮದಿಯಾಗಿ ನಡೆಯೋಣ..ನಾವು ಇಟ್ಟ ಹೆಜ್ಜೆಗಳ ಗುರುತು ಮರಳ ಮೇಲೆ.. ನಾವಾಡಿಕೊಂಡ ಮತುಗಳು ಬರೀ ನಮ್ಮವು.. ನಮ್ಮ ನಗುವಿನ ಮೇಲೆ ನಮ್ಮದೇ ಆಳ್ವಿಕೆ.
ಹಾಗೆ ನಡೆದು ಹೋದವರು, ಮರದ ಮೇಲೆ ನಿಂತಿರುವ ನಮ್ಮ Love nest ಗೆ ಹೋಗೋಣ.. ಅದು ನಮ್ಮ ಮನೆ.. ನಮ್ಮಿಬರಿಗೆ ಮೀಸಲು..ಆ ಮನೆಯ ಬಿಸುಪು. ಕದವಿಕ್ಕಿಕೊಂಡರೆ ನಮ್ಮ ಕನಸಿನ ಲೋಕ ಕಣ್ದೆರೆಯಬೇಕು. ನಮ್ಮದು ಒಂದು ದೀರ್ಘ ಪ್ರೀತಿಯ ನಿದ್ರಾಲೋಕ.ಕನಸು ಕನವರಿಕೆಗಳನ್ನು ಹಂಚಿಕೊಳ್ಳೋಣ....ಆ ಬೆಳಕ ರಾತ್ರಿಗೆ ಹಗಲು ಬಾರದು.. ನಮ್ಮ ಕನಸು ನಿರಂತರ.
ನೀನು ಉದ್ದುದ್ದ ಶುದ್ಧ ನೀರು
ಮೊದಲ ಪ್ರೀತಿಗೆ ಒಡ್ಡಿಕೊಂಡ ಹೃದಯಗಳಿಗೆ ಆಸೆಗಳ ಚಿಗುರೊಡೆಸುವ ಮೊದಲ ಮಳೆ. ಬರದ ಭೀಕರ ಬಿಸಿಲಿಗೆ ಬರಡಾಗಿಬೆಂದಿರುವ ಧರಣಿಗೆ ಬದಕ ನೀಡುವ ಉತ್ತರಿ ಮಳೆ. ಮಲೆನಾಡಿನ ಮಳೆಗಿರುವ ಭೋರ್ಗರೆತ ನೀನು. ಅಗಸ್ಟ್ ನಿಂದ ಡಿಸೆಂಬರ್ ವರೆಗೆ ಬಿಡದೇ ಸುರಿದು ಉಸ್ಸೆನ್ನಿಸುವ ಮೂಡಿಗೆರೆಯ ಸೋನೆ ಮಳೆ.
ಧೋ ಸುರಿವ ಕುಂಭದ್ರೋಣ ನೀನು. ನಿನ್ನ ಸುರಿತಕ್ಕೆ ತಲೆಯೊಡ್ಡಿ ನಿಲ್ಲಬೇಕು, ನಿನ್ನ ಸೆಳವಿಗೆ, ಭೋರ್ಗರೆವ್ ಜೋರಿಗೆ ನನ್ನ ಅಸ್ತಿತ್ವವನ್ನೆಲ್ಲ ಧಾರೆಯೆರೆಯುವ ಹಂಬಲ. ನೆನೆದು ದಣಿದವನಿಗೆ ಸಾಂತ್ವನ ನೀಡುವ ತುಂತುರಾಗಿ ಮತ್ತೆ ನಿನ್ನ ಉದ್ಭವ.
ನೀನು ಜೀವನ್ಮುಖಿ
ನಾನು ನಿನ್ನ ವಿರಹಿ. ನಿನ್ನ ಬದುಕ ಪ್ರೀತಿಗೆ ಬೆರಗಾದವನು.. ನಿನ್ನ ಕಣ್ಣ ಹೊಳಪಿಗೆ ನನ್ನ ಕಣ್ಣ ನೀರವತೆಯೆಲ್ಲ ಸರ್ವನಾಶ!...ನಿನ್ನ ಜೀವನ ಪ್ರೆಮಕ್ಕೆ ನಾನು ಬಂಧಿ. ನಿನ್ನ ಕನಸುಗಲಿಗೆಲ್ಲ ಮೊದಲ ಕೇಳುಗ, ನಿನ್ನ ಕಣ್ಣೀರಿಗೆ ಮೊದಲ ಹೆಗಲು.. ನಿನ್ನ ಪ್ರೀತಿಯೆಲ್ಲ ನನಗೆ,.. ಸ್ವಾರ್ಥಿ ನಾನು.. ನನ್ನ ಏಕಾಂತಕ್ಕೆ ಅರ್ಥವಿಲ್ಲ, ನೀನಿಲ್ಲದೆ.. ನಿನ್ನ ಹಣೆಯ ನೆರಿಗೆಗೆ ಸಾವಿರ ಮುತ್ತುಗಳು.
ಶುದ್ಧ ಬ್ರಹ್ಮ ಪ್ರಾತ್ಪರ ರಾಮ
ಹಬ್ಬದ ಸಂಭ್ರಮ ನಿನ್ನ ಸನಿಹ. ನಿನ್ನ ಭೇಟಿಯಾಗೋದು ಕೆಲವೇ ಕ್ಷಣಗಳಿರಬಹುದು, ಆದರೆ ನನಗದು ಯುಗಾದಿಯ ಸಂಜೆಯಂತೆ, ನಿನ್ನ ಮನಸಿನ ಭೂಮಿಯ ಮೀಲೆ ನನ್ನ ಪ್ರೀತಿಯ ಪೈರ ಕಂಡಾಗ ನನ್ನ ಎದೆ ತುಂಬ ಸಂಕ್ರಾಂತಿಯ ಸೂರ್ಯೋದಯ, ನನ್ನ ಮಾತುಗಳಿಗೆ ನೀನು ನಕ್ಕರೆ, ಅದು ರಾಮ ನವಮಿಯ ಪಾನಕದ ಸಿಹಿ. ನಿನ್ನೊಂದಿಗಿನ ಕ್ಷಣ್ಗಳೆಷ್ಟು ಖಾಸಗಿ!.. ಅದೆಷ್ಟು ಶುದ್ಧ! ನಿಜವಾಗಿಯೂ ನೀನೆಂದರೆ ಸಂಜೆ ಏಳರ ವೇಳೆಗೆ ಅಮ್ಮ ಹಚ್ಚಿಡುವ ತುಪ್ಪದ ದೀಪ.
ಹಬ್ಬಗಳಿಗೆ ಮನಸ್ಸಿನ್ ಮೈಲಿಗೆಯನ್ನು ತೊಳೆಯುವ ಶಕ್ತಿಯಿದೆಯಂತೆ!, ನಿನ್ನ ಪ್ರೀತಿಗೆ, ನನ್ನ ಮನಸಿನ ನೋವ ಕಳೆಯುವ ತಾಕತ್ತು
ನಮ್ಮ ಪ್ರೀತಿಯ ಕ್ಷಣಗಳಲ್ಲಿ, ಬಯಕೆಯ ದೀಪಾವಳಿ.. ನಿನ್ನ ತೆಕ್ಕೆ ಸೇರಿ, ನಮ್ಮಿಬ್ಬರ ಉಸಿರೊಂದಾಗುವ ಹೊತ್ತಿಗೆ, ಸುಖದ ವಿಜಯದಶಮಿ.. ಮನಸ ಕದ್ದ ಚೌತಿ ಚಂದ್ರನೇ, ನಿನ್ನ ಮುದ್ದು ನಗುವಿನಲ್ಲಿ,... ರಾಮಸ್ಯ ಪ್ರಿಯದರ್ಶನಂ...
ನೀನು ಕನಸು..
ನಾನು ನಿನಗೊಂದು ಹೆಸರಿಟ್ಟಿದ್ದೀನೆ. ಕನಸು. ಕನಸೆಂದಿಗೂ ಕನಸಾಗಿದ್ದರೆ ಅದನ್ನ ನನಸಾಗಿಸಲು ನಮ್ಮ ತುಡಿತ, ಆ ತುದಿತದಲ್ಲೇ ಸೊಂತೋಷ ಸಾರ್ಥಕ್ಯ,.. ಕನಸು ಹತ್ತಿರಾಗುತ್ತಿದ್ದಂತೆ, ಇನ್ನೇನು ನನಸಾಗಿಯೇ ಹೋಯ್ತೆಂಬ ರೋಮಾಂಚನ!..ಬೇರೆ ಹೇಗೂ ನಿನ್ನ ಬಗ್ಗೆ ನನ್ನ ಭಾವನೆ ಗಳನ್ನು ಹೇಳಿಕೊಳ್ಳಲಾರೆ.
ಎಷ್ಟು ನಿಜ!.. ಬದುಕಿಗೊಂದು ಕನಸಿರಬೇಕು...ಅದೂ.. ಸುಮ್ಮನೆ ನನಸಾಗಿ ಬಿಡುವ ಕನಸಲ್ಲ.. ಹಾಗೆ ಸುಲಭಕ್ಕೆ ನನಸಾಗಿ ಹೋದರೆ ಬದುಕಿಗಿನ್ನೆಲ್ಲಿಯ ಸೊಗಸು?..ಆ ಕನಸಿಗಾಗಿಯೇ ನಾವು ಪ್ರತಿ ಹಗಲು ನಿದ್ದೆ ಬಿಟ್ಟೇಳಬೇಕು..ರಾತ್ರಿ ಮತ್ತದೇ ಕನಸಿಗೆ ಶರಣು. ಹಗಲ್ಲೆಲ್ಲ ಆ ಕನಸಿನ ಹಿಂದೆ ಓಟ. ಒಮ್ಮೆ ನನಸಾಯಿತೋ.. ಅದು ಮುಕ್ತಾಯವಲ್ಲ..ಆ ಕನಸು ಮತ್ತಷ್ಟು ವಿಸ್ತಾರ ವಾಗಬೇಕು. ಕನಸಿನೊಂದಿಗೆ, ಕನಸಿದವನೂ ಬೆಳೆದು ಮಾಗಬೇಕು.. ಬದುಕು ಪೂರ್ಣ..
ಮಾತನಾಡ ಬೇಡ ನೀನು
ಬೇಡ ಮಾತುಗಳು ನಮಗೆ ಇನ್ನು. ಅವೆಷ್ಟೋ ವರ್ಷಗಳು ವಟ ವಟ ಮಾತುಗಳಲ್ಲಿ ಕಳೆದು ಹೋಗಿವೆ. ನಿನ್ನ ಚಟ ಪಟ ಮಾತುಗಳನ್ನು ಕೇಳಿ ನನ್ನಲ್ಲಿನ ಕೇಳುಗ ರೋಸಿ ಹೋಗಿದ್ದಾನೆ!.. ಸಾಕು ಇನ್ನು.. ದಯವಿಟ್ಟು ಸಾಕು..
ಇನ್ನುಳಿದಷ್ತು ಕಾಲ ಮೌನ ವಾಗಿದ್ದು ಬಿಡೋಣ ನಾವು..ವಟಗುಟ್ಟಿ ನಮ್ಮ ಸಂಬಂಧದ ಗಂಟಲು ಹಿಸುಕಿದ್ದು ಸಾಕು..ಒಂದಷ್ಟು ಸಮಯ, ಮಾತುಗಳ ಹಂಗಿಲ್ಲ್ದ ಬದುಕಿಬಿಡೋಣ.. ನಿನ್ನ ಪಾಡಿಗೆ ನೀನಿರು.. ನನ್ನ ಪಾಡು ನನಗಿರಲಿ.
ನನಗೆ ಹುಚ್ಚೆನ್ನುತ್ತೀಯಾ?. ಹೌದು.. ನನಗೆ ನಿನ್ನ ಹುಚ್ಚು... i am mad about you!!..ದಿನವೂ ನೀನು ಹೊಸತಾಗಿ ನನಗೆ ಬೇಕು.. ಅದಕ್ಕೇ ಹೇಳಿದ್ದು.. ಮಾತು ಸತ್ತ ನಂತರವೂ ನೀ ನನಗೆ ಹೊಸತಾಗಿ ಕಾಣಬೇಕೆಂದರೆ.. ನಿಲ್ಲಿಸು ಮಾತುಗಳನ್ನ.
No comments:
Post a Comment